ಶುಕ್ರವಾರ, ಅಕ್ಟೋಬರ್ 2, 2026

ಕಿತ್ತೂರ ಕನ್ನಡತಿ | ಮಕ್ಕಳ ಕವನ | ವೆಂಕಟೇಶ ಚಾಗಿ | kittoora kannadati | makkala kavana | venkatesh chagi

 *ಕಿತ್ತೂರ ಕನ್ನಡತಿ**


ವೀರರಾಣಿಯ ಕಥೆಯ ಕೇಳಿರಿ 
ಕನ್ನಡ ನಾಡಿನ ಮಕ್ಕಳೇ 
ಕಿತ್ತೂರಿಗಾಗಿ ಹೋರಾಡಿ ಮಡಿದ 
ರಾಣಿಯ ಕಥೆಯ ಹಾಡಲೇ...||


ಮಲ್ಲ ಸರ್ಜನಿಗೆ ಕಿರಿಯ ರಾಣಿಯು
ವೀರಮಾತೆ ನಮ್ಮ ಚೆನ್ನಮ್ಮ
ನಾಡ ರಕ್ಷಣೆಗೆ ನಿಂತರಾಣೆಯು
ಕೆಚ್ಚೆದೆಯ ಕಲಿಯು ನಮ್ಮಮ್ಮ ||

ಕೆಂಪು ಕೋತಿಗಳೇ ತೊಲಗಿ ಎನ್ನುತ
ಸಿಡಿಲಿನಂತೆ ಗುಡುಗಿದಳು
ಕನ್ನಡ ನಾಡಿನ ಗರಿಮೆಯ ಸಾರಲು
ಬಿಳಿಯರ ಹುಟ್ಟಡಗಿಸಿದಳು ||

ಸಂಗೊಳ್ಳಿ ರಾಯಣ್ಣ ಬಾಳಪ್ಪರಂಥ
ವೀರರ ಪಡೆಯಿತು ಕಿತ್ತೂರು
ಆಂಗ್ಲರ ಸೊಕ್ಕಿಗೆ ಕೊಳ್ಳಿಯನಿಟ್ಟ
ಯೋಧರ ನಾಡು ನಮ್ಮೂರು ||

ಖಡ್ಗ ಬೀಸುತ ಛಲದಿ ನುಗ್ಗುತ
ವೈರಿಯ ನೆತ್ತರು ಹರಸಿದರು
ದುಷ್ಟ ಜನಗಳ ದುಷ್ಟ ಬುದ್ಧಿಗೆ
ಸೋಲನು ಪಡೆದು ಮರುಗಿದರು ||

ಕಿತ್ತೂರ ರಾಜ್ಯವ ಕಟ್ಟುವ ಛಲವ
ಸೆರೆಮನೆ ವಾಸದಿ ಬಿಡಲೇ ಇಲ್ಲ
ಮಾತುಗಳೆಲ್ಲ ಕಿಡಿಯಂತಾದವು
ಹೋರಾಟವನ್ನು ಮುಗಿಸಲೇ ಇಲ್ಲ ||

ಕನ್ನಡ ನಾಡಿನ ರಕ್ಷಣೆಗಾಗಿ
ಬದುಕಿನ ಅರ್ಪಿತ ಕನ್ನಡತಿ
ಕನ್ನಡ ನಾಡಿನ ಕಲಿಗಳಿಗೆಲ್ಲಾ
ಸ್ಪೂರ್ತಿಯ ಜ್ಯೋತಿ ಕನ್ನಡತಿ ..||


=> ವೆಂಕಟೇಶ ಚಾಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ