ಶುಕ್ರವಾರ, ಅಕ್ಟೋಬರ್ 2, 2026

ಕನ್ನಡದ ತೇರು | ಮಕ್ಕಳ ಕವನ | ವೆಂಕಟೇಶ ಚಾಗಿ | kannadada teru | makkala kavana | venkatesh chagi

 *ಕನ್ನಡದ ತೇರು***


ಅಗೋ ನೋಡು

ಸಾಗುತಿಹುದು ಕನ್ನಡದ ತೇರು

ಕನ್ನಡಿಗರು ಹೆಮ್ಮೆಯಿಂದ

ಎಳೆಯುತಿರುವ  ಕನ್ನಡದ ತೇರು ||ಪ||


ಜಾತಿ ಮತ ಭೇದ ಭಾವ

ಎನ್ನೋ ಮಾತೇ ಇಲ್ಲ

ಪ್ರೀತಿ ಪ್ರೇಮ ಸಹಕಾರ

ಒಂದೆ ಮಂತ್ರ ಎಲ್ಲ

ಜಗದೆಲ್ಲೆಡೆ ಕನ್ನಡದ ಕಂಪು ಹರಡುತಿರಲು

ಸಾಗುತಿಹುದು ನಮ್ಮೆಲ್ಲರ ಶಾಂತಿದೂತ ತೇರು ||


ಕೃಷ್ಣ ತುಂಗೆ ಕಾವೇರಿ

ನಮ್ಮ ಜೊತೆಗೆ ಇರುವರು

ಸಂತಸದಿ ಹಾಡುತಿಹವು

ಪ್ರಾಣಿ ಪಕ್ಷಿ ಕೋಗಿಲೆಗಳು

ತಂಗಾಳಿಯ ಕಂಪಿನಲ್ಲೂ ಕನ್ನಡವೇ ತುಂಬಿ

ಹೆಮ್ಮೆಯಿಂದ ಸಾಗುತಿಹುದು ಕನ್ನಡದ ತೇರು ||


ಬಾದಾಮಿ ಬೆಳಗೋಳ

ಹಂಪೆಗಳಂತ ಸ್ಥಳಗಳು

ಸಾವಿರಾರು ವೀರಜನರ

ಇತಿಹಾಸವ ಸಾರುತಿಹವು

ಕವಿಪುಂಗವ ಸಾಧುಸಂತ ಸಾಧನೆಯ ಶಕ್ತಿಯಲ್ಲಿ

ಸಾಗುತಿಹುದು ಕನ್ನಡಿಗರ ಶ್ರೀಗಂಧದ  ತೇರು ||


ಹಳೆಗನ್ನಡ ನಡುಗನ್ನಡ

ಹೊಸಗನ್ನಡ ಇಕನ್ನಡ

ಸಾಹಿತ್ಯವು ಸಾಗಿದಂತೆ

ಪ್ರಗತಿಯಾಯ್ತು ಸವಿಗನ್ನಡ

ಮಣ್ಣ ಕಣದಕಣದಲಿ ಹಸಿರು ಗಿರಿಯ ಕಂಪಲಿ

ಹೆಮ್ಮೆಯಿಂದ ಸಾಗುತಿಹುದು ಕನ್ನಡಿಗರ ತೇರು ||


ವೆಂಕಟೇಶ ಚಾಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ