ಮೊದಲ ಮಳೆ | ಮಕ್ಕಳ ಕವನ | ವೆಂಕಟೇಶ ಚಾಗಿ | modala male | makkala kavana | venkatesh chagi venkat
**ಮೊದಲ ಮಳೆ**
ಮಕ್ಕಳ ಕವನ
ಇಳೆಗೆ ಬಂತು ಮೊದಲಮಳೆ
ನೆಲಕೆ ತಂತು ಹೊಸತು ಕಳೆ
ಚಿಗುರು ಮೂಡಲೆಂಥ ಮೋಡಿ
ಇಂಥ ಸೊಬಗ ಎಲ್ಲ ನೋಡಿ ||
ಬಳಲಿದಂಥ ಮರಗಳಲ್ಲಿ
ಬಿಸಿಲನುಂಡ ಗೂಡುಗಳಲಿ
ಮತ್ತೆ ಬಂತು ಹೊಸತನ
ಕೇಳ ಬನ್ನಿ ತನತನ ||
ದೇವನೆಂಥ ಮೋಡಿಗಾರ
ಜೀವ ತರುವ ಜಾದುಗಾರ
ಬಾನ ತುಂಬ ಹಕ್ಕಿ ಆಟ
ನರನು ಕಲಿಯಲಾರ ಪಾಠ ||
ಸಾಲು ಸಾಲು ಮರಗಳಲ್ಲಿ
ಪುಟ್ಟ ಪುಟ್ಟ ಹಕ್ಕಿ ಗೂಡುಗಳಲಿ
ದಿನವೂ ಒಂದು ಬೇರೆ ಹಬ್ಬ
ಸೊಬಗ ನೋಡು ಹತ್ತಿ ದಿಬ್ಬ ||
ಜಗವ ಬೆಳಗೊ ದಿನಕರ
ಹರಸಿ ನಗುವ ಶುಭಕರ
ಚುಕ್ಕಿ ತಾರೆ ಚಂದ್ರರೆಲ್ಲ
ಭುವಿಯ ನೋಡ ಬರುವರಲ್ಲ ||
ಇಳೆಗೆ ಮಳೆಯು ಬರುತಲಿರಲಿ
ಜಗಕೆ ಹರುಷ ತರುತಲಿರಲಿ
ಇದುವೆ ಸ್ವರ್ಗ ಮರೆಯದಿರಿ
ಹಸಿರು ಅಳಿಸಿ ಮರುಗದಿರಿ ||
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ