ನಮ್ಮಯ ಅಜ್ಜಿ*
ಬುಧವಾರ, ಜನವರಿ 7, 2026
ನಮ್ಮಯ ಅಜ್ಜಿ | ಮಕ್ಕಳ ಕವನ | ವೆಂಕಟೇಶ ಚಾಗಿ | nammaya ajji | makkala kavana | venkatesh chagi
ಅಜ್ಜಿ ಅಂದರೆ ನನಗೆ ಇಷ್ಟ
ಅಜ್ಜಿ ಕೊಡುವ ಚೆಕ್ಕುಲಿ ಇಷ್ಟ
ಅಜ್ಜಿಯ ಜೊತೆಗೆ ಆಟವು ಇಷ್ಟ
ಅಜ್ಜಿ ಇರದಿರೆ ತುಂಬಾ ಕಷ್ಟ |
ಪೇಟೆಗೆ ಹೋದರೆ ನಮ್ಮಯ ಅಜ್ಜಿ
ತರುವಳು ತಿಂಡಿಯ ನಮ್ಮಯ ಅಜ್ಜಿ
ಹೊಸ ಹೊಸ ಬಟ್ಟೆ ಗಿಲಿಗಿಲಿ ಗೆಜ್ಜೆ
ಮರೆಯದೆ ತರುವಳು ಪ್ರೀತಿಯ ಅಜ್ಜಿ
ಜಾತ್ರೆಗೆ ಹೋದರೆ ನಮ್ಮಯ ಅಜ್ಜಿ
ತಿನ್ನಲು ತರುವಳು ಬಿಸಿಬಿಸಿ ಬಜ್ಜಿ
ಕೀಲಿ ಕಾರು ಚೆಂದದ ಗೊಂಬೆ
ಮರೆಯದೆ ತರುವಳು ಪ್ರೀತಿಯ ಅಜ್ಜಿ |
ಹಳ್ಳಿಗೆ ಹೋದರೆ ನಮ್ಮಯ ಅಜ್ಜಿ
ಮನೆಗೆ ತರುವಳು ಜೋಳ ಸಜ್ಜಿ
ಪೇರಲ ಮಾವು ನೇರಳೆ ಹಣ್ಣು
ನನಗೆ ತರುವಳು ಮರೆಯದೆ ಅಜ್ಜಿ
ಅಜ್ಜಿ ಅಜ್ಜಿ ಎಲ್ಲರ ಅಜ್ಜಿ
ಮುದ್ದಿಸಿ ಉಣಿಸುವ ಮದ್ದಿನ ಅಜ್ಜಿ
ಪಾಠವ ಓದಿಸಿ ಲೆಕ್ಕವ ಮಾಡಿಸಿ
ಮಲಗಿಸಿ ಬಿಡುವಳು ಲಾಲಿಯ ಹಾಡಿ
✍ ವೆಂಕಟೇಶ ಚಾಗಿ
ಶನಿವಾರ, ಆಗಸ್ಟ್ 9, 2025
ಮಂಗ ಮತ್ತು ಮೊಸಳೆ | ಮಕ್ಕಳ ಕಥಾಕವನ | ವೆಂಕಟೇಶ ಚಾಗಿ | manga mattu mosale | monkey and crocodile| | makkala katha kavana | venkatesh chagi
ಬುಧವಾರ, ಜುಲೈ 9, 2025
ನನ್ನ ನವಿಲೆ | ಮಕ್ಕಳ ಕವನ | ವೆಂಕಟೇಶ ಚಾಗಿ | nanna navile | makkala kavana | venkatesh chagi
ನನ್ನ ನವಿಲೆ
ನವಿಲೆ ನವಿಲೆ
ಸುಂದರ ನವಿಲೆ
ಬರುವೆಯಾ ನನ್ನ
ಶಾಲೆಯ ಕಡೆಗೆ
ಇಬ್ಬರೂ ಆಡೋಣ
ಜೊತೆಯಲಿ ಇಬ್ಬರು ಕುಣಿಯೋಣ ||
ಶಾಲೆಯ ತೋಟದ
ಹೂಗಳ ನೋಡು
ಚಂದದ ಅಂದದ
ಗಿಡಗಳ ನೋಡು
ಹಾಡುತ ಕುಣಿಯುತ
ಇಬ್ಬರೂ ಹಾಡೋಣ
ಜೊತೆಯಲಿ ಇಬ್ಬರೂ ಹಾಡೋಣ ||
ತಿನ್ನಲು ಹಣ್ಣನು
ಕೊಡುವೆನು ನಿನಗೆ
ಸುಂದರ ಗರಿಯಾ
ಕೊಡುವೆಯಾ ನನಗೆ
ಮನೆಯನು ಕಟ್ಟಿ
ಆಟವ ಆಡೋಣ
ಗೊಂಬೆಯ ಮದುವೆ ಮಾಡೋಣ ||
ಗುಬ್ಬಿ ಗಿಳಿಗಳು
ಕರೆದಿವೆ ಬಳಿಗೆ
ಅಳಿಲು ಮೊಲಗಳು
ಛಂಗನೆ ಜಿಗಿದಿವೆ
ತಂಪಿನ ಮರದಡಿ
ಎಲ್ಲರೂ ಸೇರೋಣ
ಜೊತೆಯಲಿ ಎಲ್ಲರೂ ನಲಿಯೋಣ ||
=> ವೆಂಕಟೇಶ ಚಾಗಿ
=> ವೆಂಕಟೇಶ ಚಾಗಿ
ಮತ್ತಷ್ಟು ಓದಿ
Etc
ಬುಧವಾರ, ಜುಲೈ 2, 2025
ಎಂಥಾ ಸೆಕೆ | ಮಕ್ಕಳ ಕವನ | ವೆಂಕಟೇಶ ಜಾಗಿ | entha seke | makkala kavana | venkatesh chagi
ಎಂಥಾ ಸೆಕೆ..!!?
ಬಂತು ಬಂತು ಬೇಸಿಗೆಕಾಲ
ಎಲ್ಲೆಡೆ ನೋಡು ಸೆಕೆಯ ಜಾಲ
ಕುಂತರು ನಿಂತರು ಬೆವರುವೆವು
ಮನೆಯನು ಬೇಗ ಸೇರುವೆವು !!
ಆಟವನಾಟಡಲು ನೆರಳೇ ಇಲ್ಲ
ನೆರಳು ನೀಡವ ಮರಗಳು ಇಲ್ಲ
ಮನೆಯ ಕಟ್ಟಲು ಕಡಿದೆವು ನಾವು
ಬೇಸಿಗೆ ಸೆಕೆಗೆ ಬೆಂದೆವು ನಾವು..!!
ಕುಡಿಯುವ ನೀರಿಗೆ ಹಾಹಾಕಾರ
ನೀರು ಇಲ್ಲದೆ ನೆಮ್ಮದಿ ದೂರ
ಬತ್ತಿವೆ ಭೂಮಿಯ ಜಲಮೂಲ
ಬಾಧಿಸತೊಡಗಿದೆ ಬೇಸಿಗೆಕಾಲ ||
ಮರಳುಗಾಡಲೂ ಸುರಿಮಳೆಯು
ಏನನು ಹೇಳಿದೆ ನಮ್ಮ ಇಳೆಯು
ಅಭಿವೃದ್ಧಿ ಎಂಬ ನಮ್ಮಭಿಮಾನ
ನಿಸರ್ಗ ನೀಡಿತು ಬಹುಮಾನ..!!
ಪ್ರತಿ ಮನೆಗೊಂದು ಮರವಿರಲಿ
ಹಸಿರು ಉಳಿಸಿ ಕಾನೂನು ಬರಲಿ
ಊರಿಗೆ ಒಂದು ವನವಿರಲು
ಭೂಮಿ ತುಂಬಾ ಕೂಲು ಕೂಲು..||
ಮಂಗಳವಾರ, ಜುಲೈ 1, 2025
ನಾನಲ್ಲ | ಮಕ್ಕಳ ಕವನ | ವೆಂಕಟೇಶ ಚಾಗಿ | naanalla | makkala kavana | venkatesh chagi
**ನಾನಲ್ಲ**
(ಮಕ್ಕಳ ಕವನ)
ಆಗಸದಲ್ಲಿ ಕಾಮನಬಿಲ್ಲನು
ಮೂಡಿಸಿದವನು ನಾನಲ್ಲ
ಬಾನಿನಲ್ಲಿ ಹಕ್ಕಿಗೆ ಹಾರಲು
ಹೇಳಿಕೊಟ್ಟವ ನಾನಲ್ಲ..||
ಗಿಡದಲಿ ಚಂದದ ಹೂವನ್ನು
ಅರಳಿಸಿದವನು ನಾನಲ್ಲ
ಮಧುರವಾಗಿ ಕೋಗಿಲೆ ಹಾಡಲು
ಹಾಡನು ಕಲಿಸಿದವ ನಾನಲ್ಲ ||
ರಾತ್ರಿಯ ವೇಳೆ ಬಾನಲಿ ಚುಕ್ಕಿ
ಮುನುಗಲು ಕಾರಣ ನಾನಲ್ಲ
ಚಂದ ಚಂದಿರ ನಮ್ಮನು ಸೆಳೆವನು
ಸೆಳೆತಕೆ ಕಾರಣ ನಾನಲ್ಲ ||
ಗೋಡೆಯ ಮೇಲೆ ಗೊಂಬೆಯ ಚಿತ್ರ
ಬಿಡಿಸಿದವನು ನಾನಲ್ಲ
ಎದುರಿನ ಮನೆಯ ಕೋಣೆಯೊಳಗೆ
ಚೆಂಡನು ಹೊಡೆದವ ನಾನಲ್ಲ ||
ಹಕ್ಕಿಯ ಆಹ್ವಾನ | ಮಕ್ಕಳ ಕವನ | ವೆಂಕಟೇಶ ಚಾಗಿ | hakkiya aahvana | venkatesh chagi
**ಹಕ್ಕಿಯ ಆಹ್ವಾನ**
ದೂರದಲ್ಲಿ ಹಕ್ಕಿಯೊಂದು
ನನ್ನ ಕರೆದಿದೆ
ಹೇಳಲೊಂದು ಮಾತುವುಂಟು
ಬರಲು ಹೇಳಿದೆ ||
ಚೈತ್ರ ಮಾಸ ಚಿಗುರ ಕಂಡು
ಹಕ್ಕಿ ನಲಿದಿದೆ
ಜೊತೆಗೆ ನನ್ನ ಕರೆದುಕೊಂಡು
ದೂರ ಹಾರಿದೆ ||
ತಳಿರಿನೊಳಗೆ ಎಳೆಯದಾದ
ಮಾವು ಕಂಡಿದೆ
ಕುಕ್ಕಿ ಕುಕ್ಕಿ ಸವಿಯ ಬಯಸಿ
ನನಗೂ ತಿನಿಸಿದೆ ||
ಬಾನಿನಲ್ಲಿ ಮೋಡವೊಂದು
ನಮ್ಮ ನೋಡಿದೆ
ಹನಿಯ ತಾಳಿ ನಮ್ಮ ಸೇರಿ
ಕುಣಿಯ ಬಯಸಿದೆ ||
ಬಣ್ಣದಲ್ಲಿ ಬಿಲ್ಲು ಮೂಡಿ
ರಂಗು ತಂದಿದೆ
ಹನಿಗಳಲ್ಲಿ ಹಕ್ಕಿ ಮಿಂದು
ದೂರ ಹಾರಿದೆ ||
ಗುರುವಾರ, ಏಪ್ರಿಲ್ 17, 2025
ಮೊದಲ ಮಳೆ | ಮಕ್ಕಳ ಕವನ | ವೆಂಕಟೇಶ ಚಾಗಿ | modala male | makkala kavana | venkatesh chagi
ಮೊದಲ ಮಳೆ
ಇಳೆಗೆ ಬಂತು ಮೊದಲಮಳೆ
ನೆಲಕೆ ತಂತು ಹೊಸತು ಕಳೆ
ಚಿಗುರು ಮೂಡಲೆಂಥ ಮೋಡಿ
ಇಂಥ ಸೊಬಗ ಎಲ್ಲ ನೋಡಿ ||
ಬಳಲಿದಂಥ ಮರಗಳಲ್ಲಿ
ಬಿಸಿಲನುಂಡ ಗೂಡುಗಳಲಿ
ಮತ್ತೆ ಬಂತು ಹೊಸತನ
ಕೇಳ ಬನ್ನಿ ತನತನ ||
ದೇವನೆಂಥ ಮೋಡಿಗಾರ
ಜೀವ ತರುವ ಜಾದುಗಾರ
ಬಾನ ತುಂಬ ಹಕ್ಕಿ ಆಟ
ನರನು ಕಲಿಯಲಾರ ಪಾಠ ||
ಸಾಲು ಸಾಲು ಮರಗಳಲ್ಲಿ
ಪುಟ್ಟ ಪುಟ್ಟ ಹಕ್ಕಿ ಗೂಡುಗಳಲಿ
ದಿನವೂ ಒಂದು ಬೇರೆ ಹಬ್ಬ
ಸೊಬಗ ನೋಡು ಹತ್ತಿ ದಿಬ್ಬ ||
ಜಗವ ಬೆಳಗೊ ದಿನಕರ
ಹರಸಿ ನಗುವ ಶುಭಕರ
ಚುಕ್ಕಿ ತಾರೆ ಚಂದ್ರರೆಲ್ಲ
ಭುವಿಯ ನೋಡ ಬರುವರಲ್ಲ ||
ಇಳೆಗೆ ಮಳೆಯು ಬರುತಲಿರಲಿ
ಜಗಕೆ ಹರುಷ ತರುತಲಿರಲಿ
ಇದುವೆ ಸ್ವರ್ಗ ಮರೆಯದಿರಿ
ಹಸಿರು ಅಳಿಸಿ ಮರುಗದಿರಿ ||
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
ಶಾಲಾ ಉಪಯುಕ್ತ
SCHOOL - ಶಾಲಾ ಉಪಯುಕ್ತ
Gjhn
MDM - ಮದ್ಯಾಹ್ನ ಬಿಸಿಯೂಟ ಯೋಜನೆ





